ನವೀಕರಣ ಶಿಕ್ಷಣ -

ಶಿಕ್ಷಕರಲ್ಲಿನ ಬೋಧನ ವಿಷಯದ ಪಾಂಡಿತ್ಯವನ್ನೂ ಬೋಧನಾ ಸಾಮಥ್ರ್ಯವನ್ನೂ ಹೊಸ ಹೊಸ ಅನುಭವಗಳ ಮೂಲಕ ಹೆಚ್ಚಿಸುವುದಕ್ಕೂ ಮಾಸಿ ಹೋಗಿರಬಹುದಾದ ಹಿಂದಿನ ಅನುಭವಗಳನ್ನು ಮರಳಿ ಮನದಟ್ಟು ಮಾಡಿಕೊಡುವುದಕ್ಕೂ ಏರ್ಪಡಿಸುವ ಶಿಕ್ಷಣ (ರಿಫ್ರೆಷರ್ ಕೋರ್ಸ್). ಸಾಮಾನ್ಯವಾಗಿ ಶೈಕ್ಷಣಿಕ ವರ್ಷದಲ್ಲಿ ಬರುವ ದೀರ್ಘಾವಧಿ ರಜೆಯ ದಿನಗಳಲ್ಲಿ ಈ ಶಿಕ್ಷಣವನ್ನು ಏರ್ಪಡಿಸುವುದುಂಟು. ಶಾಲಾ ಕಾಲೇಜುಗಳಲ್ಲಿ ಅವರ ಬೋಧನೆ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುವುದೇ ಇದರ ಪ್ರಧಾನ ಗುರಿ. ಪಾಶ್ಚಾತ್ಯರಾಷ್ಟ್ರಗಳಲ್ಲಿ ನಡೆದು ಬರುತ್ತಿರುವಂತೆಯೇ ಭಾರತದಲ್ಲೂ ಈಚೆಗೆ ಈ ಶಿಕ್ಷಣದ ಕಾರ್ಯಕ್ರಮಗಳು ಪ್ರಚಾರಕ್ಕೆ ಬರುತ್ತಿವೆ.

ಈ ಶಿಕ್ಷಣದ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಶಿಕ್ಷಕರಿಗೆ ಹಲವಾರು ಹೊಸ ವಿಷಯಗಳ ಪರಿಚಯ ಮಾಡಿಸುವುದುಂಟು. ಹೆಚ್ಚಿನ ವಿಷಯಪಾಂಡಿತ್ಯವನ್ನು ಗಳಿಸಲು ಮಾರ್ಗದರ್ಶನ, ಪಠ್ಯ ವಿಷಯಗಳಲ್ಲಿ ಸೇರುವ ಹೊಸ ವಿಷಯಗಳ ಪರಿಚಯ. ಹೊಸ ಹೊಸ ದೃಷ್ಟಿಕೋನಗಳಿಂದ ಬೋಧನ ವಿಷಯಗಳ ಅವಲೋಕನ, ಬೋಧನ ವಿಷಯಗಳಲ್ಲಿ ತಜ್ಞರು ಮಾಡಿರುವ ಸಂಶೋಧನೆಯ ಫಲಗಳ ವಿಮರ್ಶೆ, ನೂತನ ಬೋಧನವಿಧಾನಗಳ ಗುಣಾವಗುಣಗಳ ಪರಿಶೀಲನೆ, ನವೀನ ಶಿಕ್ಷಣದ ಧ್ಯೇಯಗಳಿಗೆ ಅನುಸಾರವಾಗಿ ಪಠ್ಯಪುಸ್ತಕಗಳ ಪರಿಶೀಲನೆ ಮತ್ತು ರಚನೆ, ಶಾಲಾಕಾಲೇಜುಗಳಲ್ಲಿ ಪ್ರಚಲಿತವಿರುವ ಪರೀಕ್ಷಾಕ್ರಮಗಳ ಪರಿಶೀಲನೆ ಮತ್ತು ಸುಧಾರಣೆ, ಬೋಧನ ವಿಷಯಗಳಲ್ಲಿ ಶಿಕ್ಷಕರಿಗೆ ಕಾರ್ಯರೂಪದ ಅನುಭವಗಳನ್ನು (ವರ್ಕ್ ಎಕ್ಸ್‍ಪೀರಿಯನ್ಸ್) ಒದಗಿಸುವುದು - ಈ ಮೊದಲಾದವು ನವೀಕರಣ ಶಿಕ್ಷಣದಲ್ಲಿ ಸೇರುತ್ತವೆ. ಇಂಥ ಕಾರ್ಯಕ್ರಮಗಳನ್ನು ವಿದ್ಯಾಸಂಸ್ಥೆಗಳೇ ಅಲ್ಲದೇ ಅನೇಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳೂ ನಡೆಸಿಕೊಂಡು ಬರುತ್ತಿವೆ. ಇಂಥ ಶಿಕ್ಷಣವನ್ನು ನೀಡುವಲ್ಲಿ ಆರ್ಥಿಕ ಸಹಾಯ ಹಾಗೂ ಪರಿಣತರ ಸೇವೆಯನ್ನು ಒದಗಿಸುವ ವ್ಯವಸ್ಥೆಯೂ ಉಂಟು.

ನವೀಕರಣದ ಶಿಕ್ಷಣದಲ್ಲಿ ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ವಿಷಯ ತಜ್ಞರಿಂದ ವಿಶೇಷ ಉಪನ್ಯಾಸಗಳು, ತಂಡದ ಚರ್ಚೆಗಳು (ಗ್ರೂಪ್ ಡಿಸ್ಕ್ಕಷನ್ಸ್), ಕಾರ್ಯರೂಪದ ವಿವರಣೆಗಳು (ಪ್ರಾಕ್ಟಿಕಲ್ ಗೈಡೆನ್ಸ್), ಕಾರ್ಯಶಿಬಿರಗಳನ್ನು ನಡೆಸುವುದರ ಮೂಲಕ ಶಿಕ್ಷಕರಿಗೆ ಹೊಸ ಹೊಸ ಅನುಭವಗಳ ಪರಿಚಯ. ವ್ಯಾಸಂಗಗೋಷ್ಠಿ (ಸೆಮಿನಾರ್) ವ್ಯವಸ್ಥೆ ಮೊದಲಾದವು ಸೇರುತ್ತವೆ. ಈ ಶಿಕ್ಷಣದಿಂದ ತಮ್ಮ ಸ್ವಪ್ರಯತ್ನದಿಂದಲೇ ತಮ್ಮ ಪಾಂಡಿತ್ಯವನ್ನೂ, ಪ್ರತಿಭೆಯನ್ನೂ ಪ್ರವರ್ಧಿಸಿಕೊಂಡು ತಮ್ಮ ವೃತ್ತಿಯಲ್ಲಿ ಜಯಪ್ರದರಾಗಬೇಕು ಎಂಬ ಮನೋಭಾವ ಶಿಕ್ಷಕರಲ್ಲಿ ಮೂಡಲು ಅವಕಾಶವಾಗುತ್ತದೆ. 

ಇಂಥ ಕಾರ್ಯಕ್ರಮಗಳು ಕಳೆದ ಹಲವು ದಶಕಗಳಿಂದಲೂ ಭಾರತದ ಬಹುತೇಕ ರಾಜ್ಯಗಳಲ್ಲಿ ನಡೆಯುತ್ತಿವೆ. ಈ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಲು ರಾಜ್ಯ ಸರ್ಕಾರಗಳಿಗೆ  ಅನೇಕ ವೇಳೆ ಕೇಂದ್ರಸರ್ಕಾರ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ನೀಡುತ್ತಿದೆ. ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಶಿಕ್ಷಣದ ಅವಶ್ಯಕತೆಗಳಿಗೆ ಅನುಸಾರವಾಗಿ ಆಗಾಗ್ಗೆ ಎಲ್ಲ ಹಂತದ ಶಿಕ್ಷಕರಿಗೂ ಈ ಶಿಕ್ಷಣವನ್ನು ಒದಗಿಸುವ ಏರ್ಪಾಡು ಮಾಡುತ್ತವೆ. ಕೇಂದ್ರಸರ್ಕಾರದಿಂದ ವಿಧಿವತ್ತಾಗಿ ಸಹಾಯ ಪಡೆಯುತ್ತಿರುವ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರೀಸರ್ಚ್ ಆ್ಯಂಡ್ ಟ್ರೇನಿಂಗ್ ಹಾಗೂ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ ಸಂಸ್ಥೆಗಳೂ ರಾಜ್ಯ ಸರ್ಕಾರಗಳಿಗೆ ಹಾಗೂ ವಿಶ್ವವಿದ್ಯಾನಿಲಯಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸುತ್ತವೆ.

ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಡೈರೆಕ್ಟೊರೇಟ್ ಆಫ್ ಸ್ಟೇಟ್ ಎಜ್ಯುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಎಂಬ ವಿಭಾಗದ ಆಶ್ರಯದಲ್ಲಿ ರಾಜ್ಯದ ಶಿಕ್ಷಣ ವಿಭಾಗದ ಎಲ್ಲ ಹಂತದ ಶಿಕ್ಷಕರಿಗೂ ಆಗಾಗ್ಗೆ ನವೀಕರಣ ಶಿಕ್ಷಣ ಒದಗುತ್ತದೆ. ಈ ಶಿಕ್ಷಣದಲ್ಲಿ ಪಾಲ್ಗೊಳ್ಳುವ ಶಿಕ್ಷಕರ ಸಂಖ್ಯೆ, ಶಿಕ್ಷಕರ ಅವಧಿ ಮತ್ತು ಕಾರ್ಯಕ್ರಮಗಳು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಒದಗಿಸುವ ಆರ್ಥಿಕ ಸಹಾಯವನ್ನು ಅವಲಂಬಿಸಿರುತ್ತವೆ.

ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳ ಆಡಳಿತ, ತಾಂತ್ರಿಕ, ವೈದ್ಯಕೀಯ, ಆರಕ್ಷಕ ಮುಂತಾದ ವಿವಿಧ ಇಲಾಖೆಗಳಲ್ಲೂ ಅವುಗಳ ಸಿಬ್ಬಂದಿ ವರ್ಗದವರಿಗೂ ಇಂಥ ಶಿಕ್ಷಣದ ಸೌಲಭ್ಯ ಒದಗಿಸಲಾಗುತ್ತಿದೆ. ನಿಯೋಜಿತರಾದ ಸಿಬ್ಬಂದಿ ಹೆಚ್ಚಿನ ಪರಿಣತಿಯನ್ನು ಪಡೆದು ಉತ್ತಮ ರೀತಿಯಿಂದ ಕಾರ್ಯ ನಿರ್ವಹಣೆ ಮಾಡಲು ಅದರಿಂದ ಸಹಾಯವಾಗುತ್ತಿದೆ.							
		(ಎಸ್.ಎಸ್.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ